Tuesday, November 10, 2009

ಚಿಗುರು ಮೂಡದಿರಲಿ.....!


ಕೊಳಲೂದುತ ನಿಂತ ಕೃಷ್ಣ ಮತ್ತು ಗರಿಬಿಚ್ಚಿ ನರ್ತಿಸುವ ನವಿಲು ಒಂದೇ ಅನ್ನಿಸುವಂತಾಯ್ತು. ಅದೇಕೊ ಕೊಳಲ ದನಿ, ನವಿಲು ನರ್ತನ, ಕೃಷ್ಣ ಗಾಂಭಿರ್ಯ ಎಲ್ಲ ಒಂದೇ, ಕೊಳಲೂದುವ ಹರಿಯೇ ಗರಿಬಿಚ್ಚಿದ ನವಿಲು, ಗರಿಬಿಚ್ಚಿದ ನವಿಲೇ ಕೊಳಲೂದುವ ಕೃಷ್ಣ. ಏನೂ ವ್ಯತ್ಯಾಸ ಕಾಣದು ನವಿಲುಗರಿ ಕಂಡರೂ ಕೃಷ್ಣ ಕಣ್ಣೆದುರಿಗೆ, ಕೊಳಲ ಸ್ವರ ಹೊರಡಿಸುವ ಕಿಂಡಿ ಕಂಡರೂ ಕೃಷ್ಣ !

ಒಂದೇ ಒಂದು ದಿನ ನೆನಪ ತೆಕ್ಕೆಯಿಂದ ಹೊರಬಂದರೆ ಬರಡು ಅನ್ನಿಸುವ ಜೀವನ. ಎಂಥಾ ಮೌನ ಇಳಿಬಿದ್ದ ಹೆರಳ ಮಡಿಲಲ್ಲಿ ಕುಳಿತ ಮಲ್ಲಿಗೆಯ ಮೊಗ್ಗು ಅರಳುವ ಸದ್ದು ಕೇಳುವಷ್ಟು ಮೌನ ಇಲ್ಲಿದೆ. ನಾನು ನಕ್ಷತ್ರ ನೋಡಲು ಕುಳಿತು ದಿನಗಳಾಯ್ತು . ಮೋಡ ಕಟ್ಟಿದ ಆಕಾಶದಲ್ಲಿ ನಿಶ್ಯಬ್ದ. ಮೋಡ ಮಳೆಯಾಗದು ಅತ್ತ ಶುಭ್ರ ಆಕಾಶವನ್ನೂ ತೋರದು. ಅದೇನು ವಿಪರ್ಯಾಸವೋ ಅಥವಾ ಪ್ರಕೃತಿಯೂ ಈ ಘಟನೆಗೆ ಪೂರಕವೋ ಹುಣ್ಣಿಮೆಯಲ್ಲಿ ಕಂಡ ಚಂದ್ರ ಚೂರು ಚೂರಾದರೂ ಕಾಣಿಸಿಕೊಳ್ಳ ಬಾರದೇ ? ಮುಚ್ಚಿದ ಮೋಡ ಇಂಚಾದರೂ ಮರೆಯಾಗಬಾರದೇ ?

ಹ್ಹ್‌... ಮನುಷ್ಯ ಹೃದಯವನ್ನು ನಂಬಿ ಚಿರಂತನವಾದುದದನ್ನು ಕಟ್ಟಲು ಆಸೆ ಪಡುವುದು ಮೂರ್ಖತನ. ಎಲ್ಲ ಮುಗಿದು ಬೀಳುತ್ತದೆ ಹೌದು ಪ್ರೇಮ, ಸ್ನೇಹ, ಸೌಂಧರ್ಯ ಎಲ್ಲವೂ ವಿಸ್ಮ್ರತಿಯ ಆಳಕ್ಕೆ ಸರಿದು ಹೋಗುತ್ತದೆ ! ನನ್ನ ಇಷ್ಟದ ಕವಿ ಚಾರ್ಲ್ಸ್ ಬೋದಿಲೇರ್‌ ಹೇಳಿದ ಮಾತಿದು. ಇಷ್ಟು ದಿನ ನಂಬಿದ್ದ ನಾನು ಜೀವನದ ಎಲ್ಲಾ ಪರಿಸ್ಥಿತಿಗಳನ್ನೂ ಹಾಗೆಯೇ ಕಳೆದವನು. ಈಗ ನಂಬಲಾಗುತ್ತಿಲ್ಲ. ವಿಸ್ಮ್ರತಿಯ ಆಳಕ್ಕೆ ಇಳಿದ ಎಲ್ಲ, ಮನದ ಸಾಗರದ ಮೇಲೆ ತೇಲಿ ತೇಲಿ ಮತ್ತೆ ಜೀವನದ ತೀರಕ್ಕೆ ಬಡಿಯುವುದು ಏತಕ್ಕೋ !

ಎಲ್ಲ ಮರೆತು ಬರಡಾಗಿದ್ದ ಮನದ ಮರ ಮತ್ತೇಕೋ ಚಿಗುರು ಮೂಡಿಸಿಕೊಳ್ಳುವ ತವಕ ತಾಳುತ್ತಿದೆ. ಬೇಡ ಎನ್ನುವ ಬುದ್ಧಿ ಬೇಕು ಎನ್ನುವ ಮನಸು ! ಬೇಡ ನಾನು ಒಣಗಿದ ಮರವಾಗಿದ್ದರೇನೆ ಚೆಂದ. ಯಾವ ಹಕ್ಕಿಯೂ ಈ ಮರದಲ್ಲಿ ಗೂಡು ಕಟ್ಟಬಾರದೂ ನಾನು ಒಮ್ಮೆ ಮಾತ್ರ ಹಸಿರಾಗಿ ಉರಿದು ಹೋಗುವ ಮರ. ಇಲ್ಲಿ ಪ್ರತಿ ವಸಂತ ವಸಂತವಲ್ಲ. ನಾನು ಎಲ್ಲ ಮರಗಳ ಹಸಿರು ಕಂಡು ಕಣ್ಣರಳಿಸುವ ಕವಿ. ನಾನು ಹೀಗೆ ಇರಬೇಕು ಹಸಿರಾದರೆ ಹಸಿರಾದ ಮರದ ಉಸಿರು ಕೇಳದು. ನಾನು ಹಸಿರಾಗುವ ಮರಕ್ಕೆ ಉಸಿರಾಗಬೇಕು. ಅಲ್ಲಿರುವ ಖುಷಿ ಕಾಣಬೇಕು. ನನ್ನೆದೆಯ ಬರಹಕ್ಕೆ ಈ ಬರಡೇ ಹೆಚ್ಚಿನ ಸ್ಪೂರ್ತಿ.

ಮುಂಬರುವ ವಸಂತವೇ ನನ್ನ ಅರಳಿಸದಿರು ನಾನು ಒಣಗಿರಬೇಕು..... !

*ಸೂಚನೆ: ಹಳೆಯ ಡೈರಿಯ ಹಾಳೆಯಲ್ಲಿ ಯಾವತ್ತೋ ಬರೆದಿಟ್ಟ ಸಾಲುಗಳು...

2 comments:

ಸುಶ್ರುತ ದೊಡ್ಡೇರಿ said...

ಅದೆಷ್ಟ್ ಚನಾಗ್ ಬರೀತೀರ್ರೀ ನೀವು..

ತೇಜಸ್ವಿನಿ ಹೆಗಡೆ- said...

"ವಿಸ್ಮ್ರತಿಯ ಆಳಕ್ಕೆ ಇಳಿದ ಎಲ್ಲ, ಮನದ ಸಾಗರದ ಮೇಲೆ ತೇಲಿ ತೇಲಿ ಮತ್ತೆ ಜೀವನದ ತೀರಕ್ಕೆ ಬಡಿಯುವುದು ಏತಕ್ಕೋ !

ಮುಂಬರುವ ವಸಂತವೇ ನನ್ನ ಅರಳಿಸದಿರು ನಾನು ಒಣಗಿರಬೇಕು..... !"

ಮನವನ್ನು ತಟ್ಟಿದ ಸಾಲುಗಳಿವು. ತುಂಬಾ ಇಷ್ಟವಾಯಿತು ನಿಮ್ಮೀ ಬರಹ