
ಸೀಸದಲಿ ಬರೆದ ಚಿತ್ರವನು ನಿಮಿಷದಲಿ ಒರೆಸಿ ತೆಗೆದಂತೆ
ತೆಗೆಯಲಾಗದು ಎದೆಯಲಿ ನೀ ಬಿಡಿಸಿದ ಚಿತ್ರ ಮರೆಯಲಾಗದು
ನಿನ್ನ ನೆನಪನು ಚಿತ್ತ !
*****************
ಕಾಮನ ಬಿಲ್ಲಿಗೆ ಬಣ್ಣವೇ ಇಲ್ಲ ಇದು ನಿಜವೇ ?
ನನಗೇನೊ ಅನುಮಾನ ಬಗೆಹರಿಸೋಣವೆಂದರೆ
ಪಕ್ಕದಲ್ಲಿ ನೀನಿಲ್ಲ ನೀ ಇಲ್ಲದೆ ಬಣ್ಣವೆಲ್ಲಿಂದ !
*********
ಬರೀ ಕನಸ ಬಗ್ಗೆಯೇ ಮಾತನಾಡಿದ್ದೆಯಲ್ಲ
ಅದಕೆ ಇರಬೇಕು ನೀ ಎಲ್ಲವನ್ನೂ ಕನಸಾಗಿಸಿದ್ದು
********
ನೀ ಇರದ ಕನಸಿಗೆ ಮೂರೆ ಅಕ್ಷರ
ನೀ ಇರದ ಜೀವನವೂ ಮೂರೇ ಅಕ್ಷರ
*****
ನಾ ಬರೆದ ಬರಹಗಳೆಲ್ಲ ಬರೀ ಬರಹಗಳಲ್ಲ
ಎಂದೂ ಕೈಗೂಡದ ಕನಸುಗಳೇ ಅವೆಲ್ಲ
*****
ಬರೆದಂತೆ ನಾ ಬರಿದಾಗುತಿರುವೆ ಮೂಳೆಗಂಟಿದೆ ಚರ್ಮ
ಆದರೂ ಭದ್ರವಾಗಿದೆ ಹೃದಯ ನಿನ್ನ ನಿರೀಕ್ಷೆಯಲ್ಲಿ
*****
ಭಾವನೆಗಳೇ ವಿಚಿತ್ರ ಹಿಂಡಾಗಿ ಸಿಕ್ಕ ಮೀನೊಮ್ಮೆ
ತುಂಡಾಗಿ ಬಿದ್ದ ಬಲೆ ಇನ್ನೊಮ್ಮೆ
*******
ಎಷ್ಟಾದರಿರಲಿ ಭಾರ ಹೊರುವುದು ಕಷ್ಟವೇನಲ್ಲ
ತೂಕವಿಲ್ಲದ ಮನ ಭಾರವಾದಾಗ ಹೊರುವುದು ಸುಲಭವಲ್ಲ
*****
ನೇಣಿಗೆ ಹೋಗಿ ಸಾಯುವ ಮೊದಲು ಶಾಯರಿ ಬರೆವಾಸೆ
ಭಾವನೆಗಳ ಭಾರಕ್ಕೆ ಕುಣಿಕೆ ಹರಿಯಬಾರದಲ್ಲ !
*****
ಮುಗಿದೇ ಹೋಯಿತು ಎಂದುಕೊಂಡ ಜೀವನಕ್ಕೆ
ಹೊಸ ಕೊನೆಯ ಬರೆವ ಹುನ್ನಾರವೇಕೆ ಹುಡುಗಿ ?
******
ಹರಿದೆಸೆದ್ದಿದ್ದೆನೆ ನಿನಗಾಗಿ ನಾ ಬರೆದ ಪತ್ರಗಳ ಹೊಸದನ್ನು ಬರೆವ ಸಲುವಾಗಿ
ಕೊನೆಗೂ ಹರಿದೆಸೆದೆ ಗಾಳಿಗೆ ನೀ ನನ್ನ ಚಿಗುರೊಡೆದ ಹೊಸ ಕನಸುಗಳ...
*******
ವಿರಹ ಎಂಬುದು ಮೂರೇ ಅಕ್ಷರ ಒತ್ತಿಲ್ಲ ಒತ್ತಡವಿಲ್ಲ
ಆದರೂ ಅದು ಅನುಭವಿಸುವವರಿಗೇ ಗೊತ್ತು ಅದು ಸುಡುವ ಬಗೆ ..
*******
ಭಾವನೆಗಳನ್ನು ಹೇಗಿವೆಯೋ ಹಾಗೇ ಹರಿಯಬಿಟ್ಟಿದ್ದಕ್ಕೆ
ನಾನೀಗ ಚುಕ್ಕಾಣಿ ಹರಿದ ಹಡಗು
ಗಂಟು ಬೀಳಬೇಕಿತ್ತು ಪ್ರಾಸ, ಛಂದಸ್ಸು ಗಣಗಳಿಗೆ !
*******
ಪೌರ್ಣಿಮೆಯು ಉರಿಬಿಸಿಲಂತೆ ಕಾಡುವುದು
ನೆರಳೆಂದು ನೆರಳಾಗದು ತೃಷೆ ನೀಗಿಸದು ನೀರು
ಇದಕ್ಕೆಲ್ಲ ಕಾರಣ ನೀನೇ ನೀರೆ !
*****
ಕಣ್ಣೆರಡು ಕೂಡಿದ್ದು ಒಮ್ಮೆ ಮಾತ್ರ ಎಷ್ಟೋ
ಮಾತುಗಳು ಹೊರಬಂದಿದ್ದು ಆ ಮೌನದಲ್ಲೇ..!
******
ಗರಿಗೆದರಿದ ನಲಿವ ನವಿಲ ಕಂಡಂತೆ ಕನಸು
ಗರಿ ಉದುರಿ ಬೋಳಾದ ನವಿಲು ನರಳಿದಂತೆ ಮನಸು ...
********
ವಸಂತದಲಿ ನಾ ಎಂದೂ ಕೋಗಿಲೆ ಗಾನ ಕೇಳಲಿಲ್ಲ
ಶಿಶಿರದಲಿ ಹುಡುಕಿದರೆ ಅದು ದೊರೆಯುವುದೇ ?
******
ಕುಕಿಲ ನಾನಾದೆ ನಿನ್ನ ಸ್ನೇಹದೊಲುಮೆಯ ತಿಂದು
ಕೇಳುವವರ್ಯಾರು ನಾ ಹಿತವಾಗಿ ಹಾಡಿದರೆ ಇಂದು !
*****
ಇರುವೇಳು ಸ್ವರದಲ್ಲಿ ಮೂಡುವ ರಾಗಗಳೆಷ್ಟೋ
ನೀ ಇದ್ದ ಮನದಲ್ಲಿ ಮೂಡಿದ ಕನಸುಗಳೆಷ್ಟೋ !
*****
ಗಿಡದ ಹೂ ಕಿತ್ತರೆ ಮತ್ತೆ ಅರಳಬಹುದು
ಮನದ ಪ್ರೀತಿ ಸತ್ತರೆ ಮತ್ತೆ ಮೂಡಬಹುದೇ ?
******
ಹಾಡುವವರಿದ್ದರೆ ಸ್ವರಕ್ಕೆ ಬೆಲೆ
ಸ್ವರವಿಲ್ಲದಿದ್ದರೆ ಹಾಡಿಗೆಲ್ಲಿಯ ನೆಲೆ ?
****
ನೆನಪು ಮೆದುಳಿಗಾದರೂ ನೋವು ಹೃದಯಕ್ಕೇಕೆ ?
ನೀ ಆಡಿದ ಮಾತನೆಲ್ಲ ಕವನವಾಗಿ ಬರೆವಾಸೆ
ನಾ ಬರೆವ ಕವನ್ಗಳಿಗೆಲ್ಲ ನಿನ್ನ ಹೆಸರೇ ಶೀರ್ಷಿಕೆ
*****
ಕಣ್ಮುಚ್ಚಿದಾಗ ಕಣ್ಣೆದುರೇ ಇರುವಿ
ಕಣ್ಬಿಟ್ಟಾಗ ಕಾಣದಾಗುವೆ
ಅದಕೆ ನಾನು ಕಣ್ಮುಚ್ಚಿ ಕುಳಿತಿರುವೆ...
ಸೂಚನೆ:ಸುಮಾರು ಆರು ವರ್ಷಗಳ ಹಿಂದೆ ಬರೆದ ಸಾಲುಗಳು ಸ್ನೇಹಿತರೊಬ್ಬರ ಒತ್ತಾಯಕ್ಕೆ ಇಲ್ಲಿ ಪ್ರಕಟಿಸುತ್ತಿದ್ದೇನೆ.